ಟಿಬೆಟನ್ ಭಾಷೆ ಮತ್ತು ಸಾಹಿತ್ಯ

ಟಿಬೆಟ್ಟಿನ ಜನ ತಮ್ಮ ಭಾಷೆಯನ್ನು ಪೋಕೆ (Bod-Skei ) ಎಂದು ಕರೆಯುತ್ತಾರೆ. ಈ ಭಾಷೆ ಟಿಬೆಟ್ಟಿನ ಭೌಗೋಳಿಕ ಪರಿಧಿಗೆ ಮಾತ್ರ ಮಿತಗೊಂಡಿಲ್ಲ. ಪ್ರಾಚೀನ ಕಾಲದಲ್ಲಿ ಇದು ಏಷ್ಯದ ಪ್ರಸ್ಥಭೂಮಿಗಳೆಲ್ಲವುಗಳ ಪ್ರಚಲಿತಭಾಷೆಯಾಗಿತ್ತು. ಈ ದಿವಸದಲ್ಲಿ ಆಮ್‍ಡೋ ಮತ್ತು ಖಾಮ್‍ಗಳನ್ನೊಳಗೊಂಡ ಟಿಬೆಟ್ಟಿನ ಜೊತೆಗೆ ಸಿಕ್ಕಿಂ, ಭೂತಾನ, ಭಾರತದೇಶದ ಹಿಮಾಲಯಗಳು (ಲಡಾಕ್ ಮತ್ತು ಲೋಹಿತ್) ಹಾಗೂ ಮಂಗೋಲಿಯದ ಕೆಲವು ಭಾಗಗಳಲ್ಲಿ ಈ ಭಾಷೆಯನ್ನು ಜನರಾಡುತ್ತಾರೆ. ಇದರಲ್ಲಿ ಸ್ಥಳೀಯ ವ್ಯತ್ಯಾಸಗಳು ಕಂಡುಬರುತ್ತವೆ.

ಪೋಕೆಯ ಮೂಲಗಳೂ ಬಾಂಧವ್ಯಗಳೂ ಇನ್ನೂ ಖಚಿತವಾಗಿ ನಿರ್ಧಾರವಾಗಿಲ್ಲ. ತಿಬೆಟನ್ ಭಾಷೆ ಟಿಬೆಟೋ-ಬರ್ಮೀ ಪಂಗಡಕ್ಕೆ ಸೇರಿದೆಯೆಂದು ಊಹಿಸಲಾಗಿದೆ. ಈ ಪಂಗಡಕ್ಕೆ ಟಿಬೆಟನ್ ಉಪಭಾಷೆಗಳಲ್ಲದೆ, ಕೆಲವು ಹಿಮಾಲಯದ ಉಪಭಾಷೆಗಳೂ ಉತ್ತರ ಅಸ್ಸಾಂ ಹಾಗೂ ಭಾರತದ ಈಶಾನ್ಯದ ಗಡಿಯ ಪ್ರದೇಶಗಳ ಉಪಭಾಷೆಗಳೂ ಕಾಚಿನ್ ಮತ್ತು ಬರ್ಮೀ ಭಾಷೆಗಳೂ ಸೇರಿವೆ.

ಈ ಟಿಬೆಟೋ-ಬರ್ಮೀ ಭಾಷೆಗಳೂ ಸಹ ಚೀನೀ ಮತ್ತು ತೈ ಭಾಷೆಗಳಿಗೆ ಸಂಬಂಧಿಸಿವೆ ಎಂದು ಪರಿಭಾವಿತವಾಗಿವೆ. ಇವೆರಡು ಗುಂಪುಗಳನ್ನೂ ಒಟ್ಟಿಗೆ ಚೀನೀ-ಟಿಬೆಟನ್ ಎಂದು ಕರೆಯುತ್ತಾರೆ. ಉಚ್ಚಾರಣೆ, ಶಬ್ದಸಮೂಹ ಮತ್ತು ವ್ಯಾಕರಣಗಳಲ್ಲಿ ಹೊರತೋರಿಕೆಯಲ್ಲಿ ಸಾಮ್ಯ ಕಂಡುಬಂದರೂ ವಾಕ್ಯ ರಚನಾ ವಿಧಾನದಲ್ಲಿ ಇವೆರಡಕ್ಕೂ ಮೂಲಭೂತ ವ್ಯತ್ಯಾಸ ಗೋಚರಿಸುತ್ತದೆ. 

ಏಳನೆಯ ಶತಮಾನದ ಮಧ್ಯಭಾಗದವರೆಗೆ, ಎಂದರೆ ಬೌದ್ಧಮತ (ಮಹಾಯಾನ ಮತ) ಟಿಬೆಟ್ಟಿನ ರಾಷ್ಟ್ರಧರ್ಮವಾಗಿ ಪರಿಣಮಿಸಿದ ವೇಳೆಗೆ ಪೋಕೆಗೆ ತನ್ನದಾದ ಯಾವ ಲಿಪಿಯೂ ಇರಲಿಲ್ಲ. ದೊಡ್ಡದಾಗಿ ಬೆಳೆದಿದ್ದ ಮಹಾಯಾನ ಸಾಹಿತ್ಯವನ್ನು ಅವಶ್ಯವಾಗಿ ಸಂಸ್ಕøತದಿಂದ ಟಿಬೆಟನ್ ಭಾಷೆಗೆ ಪರಿವರ್ತಿಸಬೇಕಾಗಿ ಬಂದುದರಿಂದ ಅದಕ್ಕೊಂದು ಲಿಪಿ ಬೇಕಾಯಿತು. ಸಂಸ್ಕøತ ಲಿಪಿಯ ಮಾದರಿಯಂತೆ ಒಂದು ಅಕ್ಷರಮಾಲಿಕೆ ರಚಿತವಾಯಿತು; ಕಾಶ್ಮೀರ, ನೇಪಾಳ ಮತ್ತು ಬಂಗಾಳಗಳಲ್ಲಿ ಬ್ರಾಹ್ಮೀಲಿಪಿ ಯಾವ ರೂಪವನ್ನು ಪಡೆಯಿತೋ ಆ ರೂಪವನ್ನು ಅನುಸರಿಸಿ ಲಿಪಿಗಳನ್ನು ಸಿದ್ಧಗೊಳಿಸಲಾಯಿತು (ಪಟ್ಟಿ ನೋಡಿ). ಟಿಬೆಟನ್ ಅಕ್ಷರಮಾಲಿಕೆಯ ಲಿಖಿತರೂಪ ಖೊಟನೀಸ್ ಲಿಪಿಗೆ ತುಂಬ ಋಣಿಯಾಗಿರುವಂತಿದೆ. ಈ ಲಿಪಿಯ ಮೂಲ ಸಹ ಭಾರತವೇ. 

ಸಂಸ್ಕøತಕ್ಕೂ ಟಿಬೆಟನ್‍ಗೂ ಇರುವ ಸಂಬಂಧ ಅಕ್ಷರಮಾಲಿಕೆ ಅಥವಾ ಲಿಪಿಯೊಂದರಲ್ಲೆ ಅಲ್ಲ, ಇದಕ್ಕಿಂತ ಹೆಚ್ಚಿನ ಬಾಂಧವ್ಯ ಇವುಗಳ ಸಾಹಿತ್ಯಗಳಲ್ಲಿ ಬೆಳೆದಿದೆ.

ಸಾಹಿತ್ಯ: ಟಿಬೆಟನ್ ಸಾಹಿತ್ಯದ ಯಾವ ವರ್ಣನೆಯಾದರೂ ಸರಿಯೆ ಅದನ್ನು ಕಂಜೂರ್ (bkah-hgyur) ಮತ್ತು ತಂಜೂರ್ (Bstan-hgyur) ಗಳಿಂದ ಪ್ರಾರಂಭಿಸಬೇಕಾಗುತ್ತದೆ. ಕಂಜೂರ್ ಎಂದರೆ ಬುದ್ಧನ ಮಾತು; ತಂಜೂರ್ ಎಂದರೆ ಶಾಸ್ತ್ರಗ್ರಂಥಗಳು. ಏಕೆಂದರೆ ಟಿಬೆಟನ್ ಜನರ ಜೀವನಕ್ರಮದ ಪ್ರತಿಯೊಂದು ಅಂಶವನ್ನೂ ಧರ್ಮ ವ್ಯಾಪಿಸಿದೆ ಎಂಬ ಒಂದು ಕಾರಣದಿಂದ ಮಾತ್ರವಲ್ಲದೆ ಈ ಪವಿತ್ರ ಸಾಹಿತ್ಯ ಸಂಗ್ರಹ ನಿಜವಾಗಿ ಒಂದು ವಿಶ್ವಕೋಶವಾಗಿದೆ ಎಂಬ ಇನ್ನೊಂದು ಕಾರಣವೂ ಇದೆಯಾದ್ದರಿಂದ. ಆದ್ದರಿಂದ ಈ ಸಂಗ್ರಹದಲ್ಲಿ ಆನುಷಂಗಿಕವಾಗಿ ಐಹಿಕ ವಿಷಯಗಳೂ ಇವೆ. ಉದಾಹರಣೆಗೆ, ವ್ಯಾಕರಣ, ಛಂದಸ್ಸು, ಕಲೆ, ವೈದ್ಯ, ರಾಜನೀತಿ ಮತ್ತು ನೀತಿ ಇವುಗಳ ಮೇಲೆಲ್ಲ ನಿರೂಪಣೆಗಳಿವೆ. 

ಕಂಜೂರ್ ಅಥವಾ ಬುದ್ಧನ ಮಾತು ಅನೇಕ ಭಾಗಗಳಾಗಿ ವಿಂಗಡವಾಗಿದೆ. ವಿನಯ, ಪಾರಮಿತ, ಅವತಂಸಕ, ರತ್ನಕೂಟ, ಸೂತ್ರ, ನಿರ್ವಾಣ ಮತ್ತು ತಂತ್ರ ಇವು ಆ ಭಾಗಗಳು, ಕಂಜೂರ್ 100ರಿಂದ 108 ಸಂಪುಟಗಳಲ್ಲಿದೆ (ನರಥಂಗ್, ಶೋ, ಡೆರಗ್, ಮುಂತಾದ ಸಂಪಾದಿತ ಗ್ರಂಥಗಳ ಪ್ರಕಾರ). 

ತಂಜೂರ್ ಅಥವಾ ಶಾಸ್ತ್ರಗಳನ್ನು ಮೂರು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು: ಸ್ತೋತ್ರಗಳು, ತಂತ್ರವ್ಯಾಖ್ಯಾನಗಳು ಮತ್ತು ಇತರ ಕೃತಿಗಳು. ಕೊನೆಯವಲ್ಲಿ ಪ್ರಮಾಣ, ನ್ಯಾಯ, ವ್ಯಾಕರಣ, ಶಿಲ್ಪಶಾಸ್ತ್ರ, ರಾಜನೀತಿ ಮುಂತಾದವು ಇವೆ. ತಂಜೂರ್ ಮೊತ್ತದಲ್ಲಿ 225 ಸಂಪುಟಗಳಷ್ಟಿದೆ.

ಕಂಜೂರ್ ಮತ್ತು ತಂಜೂರ್‍ಗಳ 90% ಭಾಗ ಸಂಸ್ಕøತ ಭಾಷಾಂತರ; ಅಪಭೃಂಶದ ಕೆಲವು ಭಾಷಾಂತರಗಳೂ ಇವೆ. ತಂಜೂರಿನಲ್ಲಿ ಟಿಬೆಟನ್ ಭಾಷೆಯ ಕೆಲವು ಸ್ವಂತ ಕೃತಿಗಳೂ ಇವೆ. ಈ ದೊಡ್ಡ ಸಂಗ್ರಹದಲ್ಲಿ ಅಚ್ಚು ಕಟ್ಟಾದ ವಿಷಯಾನುಕ್ರಮಣಿಕೆ ಮತ್ತು ವಿಷಯಗಳ ಅಕ್ಷರಾನುಕ್ರಮಣಿಕೆಗಳಿವೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ಟಿಬೆಟನ್ ವಿದ್ವಾಂಸ ಈ ಗ್ರಂಥವನ್ನು ಮೊದಲು ನೋಡುತ್ತಾನೆಂಬುದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆಂದುಕೊಂಡು ಟಿಬೆಟನ್ ಸಾಹಿತ್ಯ ಬರೀ ಧರ್ಮಗ್ರಂಥಗಳಿಂದಲೂ ಭಾಷಾಂತರಗಳಿಂದಲೂ ತುಂಬಿದೆ ಎಂದು ಭಾವಿಸಿದರೆ ತಪ್ಪಾದೀತು.

ಅಲ್ಲಿನ ಸ್ವೋಪಜ್ಞಕೃತಿಗಳು ಇವಕ್ಕಿಂತ ಹೇರಳವಾಗಿಯೂ ವೈವಿಧ್ಯಪೂರ್ಣವಾಗಿಯೂ ಇವೆ. ಧಾರ್ಮಿಕ ಮತ್ತು ಐಹಿಕ ವಿಷಯಗಳ ಸುಪರಿಷ್ಕøತವಾಗಿ ವೃದ್ಧಿಹೊಂದಿದ್ದವಲ್ಲದೆ ಸಾಹಿತ್ಯದಲ್ಲಿ ಅವು ಬಹು ಪ್ರಶಸ್ತವಾದ ರೂಪಗಳನ್ನೂ ಪಡೆದಿವೆ. ಸಾಹಿತ್ಯದ ಮೊತ್ತದಲ್ಲಿ ಪದ್ಯ, ವ್ಯಾಕರಣ, ಛಂದಸ್ಸು, ಅಕ್ಷರ ಸಂಯೋಜನ, ಶಬ್ದಕೋಶ, ಅರ್ಥಕೋಶ ಮುಂತಾದವು ಸೇರಿವೆ. ಲೇಖನಗಳ ಅನೇಕ ಭಾಗ ಚರಿತ್ರೆ ಮತ್ತು ಭೂಗೋಳಕ್ಕೆ ಸಂಬಂಧಿಸಿದೆ, ಸಣ್ಣ ವಿಶ್ವಕೋಶಗಳು ಸಹ ಇವೆ. ಶಾಸ್ತ್ರ ಭಾಗದಲ್ಲಿ, ವೈದ್ಯ, ರಸಾಯನಶಾಸ್ತ್ರ, ಖನಿಜಶಾಸ್ತ್ರ ಜೊತೆಗೆ ಗಣಿತ ಮತ್ತು ಖಗೋಳ ವಿಜ್ಞಾನಗಳಿವೆ. ಭಾರತೀಯವಲ್ಲದೆ ಇತರ ಧಾರ್ಮಿಕ ಕೃತಿಗಳು ಸಾಮಾನ್ಯವಾಗಿ ಚೋಜಂಗ್ (ಛಿhos-hbಥಿuಟಿ), ಎಂದರೆ, ಮಹಾಯನ ಹರಡಿರುವ ವಿವಿಧಭಾಗಗಳಲ್ಲಿ ಧರ್ಮದ ಬೆಳೆವಣಿಗೆಯ ಇತಿಹಾಸ ಮತ್ತು ನಮ್‍ಥಾರ್ (ಖಟಿಚಿmಣhಚಿಡಿ), ಎಂದರೆ, ಸಾಧು ಅಥವಾ ಯೋಗಿಯೊಬ್ಬನ ಜೀವನ ಚರಿತ್ರೆ.. ಸುಂಬಂಗಳೇ (ಉsum-hbಥಿum) ಅವತಾರಗಳು. ಸಾಧುಗಳು ಮತ್ತು ಟಿಬೆಟನ್ ಮಾತಾಡುವ ಪ್ರದೇಶಗಳಲ್ಲಿನ ಪ್ರತಿಭಾವಂತ ವಿದ್ವಾಂಸರು ಇವರ ವಿಷಯಕವಾದ ಕೃತಿ ಸಂಗ್ರಹಗಳೇ ಭಾಷಾಂತರ ಸಾಹಿತ್ಯವನ್ನು ಸಂಖ್ಯೆಯಲ್ಲೂ ಪ್ರಮಾಣದಲ್ಲೂ ಮೀರಿಸಿವೆ. 

ಮಿಲೇರಪನ ಕವಿತೆಗಳಲ್ಲದೆ ಮಿಕ್ಯಾವ ಸ್ವೋಪಜ್ಞಕೃತಿಗಳೂ ಟಿಬೆಟನ್ ಭಾಷೆಯಲ್ಲಿಲ್ಲದಿದ್ದರೂ ಸರಿಯೆ ಆ ಕವಿತೆಗಳೇ ಸಾಕು ಟಿಬೆಟನ್ ಸಾಹಿತ್ಯಕ್ಕೆ ಪ್ರಪಂಚದಲ್ಲಿ ಸನ್ಮಾನ್ಯ ಸ್ಥಾನವನ್ನು ದೊರಕಿಸಿಕೊಡುವುದಕ್ಕೆ. 

ಟಿಬೆಟನ್ ಸಾಹಿತ್ಯ ನಿಧಿಗಳು ಸಂಸ್ಕøತ ಸಾಹಿತ್ಯದ ಅಭ್ಯಾಸಕ್ಕೆ ವಿಶೇಷವಾಗಿ ಸಹಕಾರಿಯಾಗಿವೆ. ಭಾಷಾಂತರಗಳು ಮೂಲಕ್ಕೆ ಸರಿಯಾಗಿರುವುದರಿಂದ ಅವುಗಳ ಮೂಲಕ ಬೌದ್ಧ ಸಂಸ್ಕøತ ಸಾಹಿತ್ಯವನ್ನೆಲ್ಲ ಸಂಪೂರ್ಣವಾಗಿ ಕಂಚೂರಿನಲ್ಲಿ ಅಳವಡಿಸಲಾಗಿದೆ. ಮತಕ್ಕೂ ಆಚಾರಕ್ಕೂ ಸಂಬಂಧಪಟ್ಟ ನಿಯಮಾವಳಿಗಳ ಪಾಠಗಳು, ಬುದ್ಧಚರಿತ, ಲಲಿತವಿಸ್ತಾರ, ಬೋಧಿಸತ್ತ್ವವಂದನ ಕಲ್ಪಲತಾ ಮುಂತಾದ ಗ್ರಂಥಗಳೂ ಹೀಗೆ ಸಂಪೂರ್ಣವಾಗಿ ಭಾಷಾಂತರಿತವಾದವು. ಜನರಿಗೆಲ್ಲರಿಗೂ ಸಮಸ್ತ ಪಂಥಗಳಲ್ಲೂ ಸರ್ವಕಾಲದಲ್ಲೂ ಬೇಕಾಗುವ ಅನಘ್ರ್ಯವಾದ ಆರು ಮಹಾಯಾನ ಭೂಷಣದ (ನಾಗಾರ್ಜುನ, ಆರ್ಯದೇವ, ಅಸಂಗ, ವಸುಬಂಧು, ದಿಜ್ಞಾಗ ಮತ್ತು ಧರ್ಮಕೀರ್ತಿ) ಗ್ರಂಥಗಳು ಟಿಬೆಟನ್ ಭಾಷೆಗೆ ಪರಿವರ್ತಿತವಾಗಿವೆ. ಅಶ್ವಘೋಷ, ಗುಣಪ್ರಭ ಮತ್ತು ಶಾಕ್ಯಪ್ರಭ ಎಂಬ ಈ ಮೂರು ಪ್ರಥಮ ಶ್ರೇಣಿಯ ತಾರಾಪುಂಜದ ಕೀರ್ತಿಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಬುದ್ಧಪಾಲಿತ, ಭವವಿವೇಕ, ಕಮಲಶೀಲ, ವಿಮಲಮಿತ್ರ, ಚಂದ್ರ ಕೀರ್ತಿ ಅಥವಾ ಯಸೋಮಿತ್ರ- ಇವರ ಗ್ರಂಥಗಳು ಭಾಷಾಂತರಿತವಾಗಿವೆ. ಮಾನವ ಹಿತತತ್ತ್ವದ ಬಹುಶ್ರೇಷ್ಠ ಪ್ರತಿಪಾದಕನಾದ ಶಾಂತಿದೇವ ಈ ಬಳಗಕ್ಕೆ ಸೇರಿದ್ದಾನೆ. ಟಿಬೆಟ್ಟಿನವರಿಗೆ ವಿಶೇಷಾಭಿಮಾನಕ್ಕೆ ಪಾತ್ರವಾದ ಶಾಂತರಕ್ಷಿತ ಮತ್ತು ಅತೀಶ ದೀಪಂಕರ ಇವರ ಕೃತಿಗಳೂ ಸೇರಿವೆ. ಈ ಪ್ರಕಾರವಾಗಿ ಪಾರಮಿತ ಸಾಹಿತ್ಯವೆಲ್ಲ, ಮಾಧ್ಯಮಿಕ ಮತ್ತು ಶೂನ್ಯತಾ ಮೇಲಣ ವ್ಯಾಖ್ಯಾನಗಳು ಮತ್ತು ಇತರ ಲೇಖನ ಶ್ರೇಣಿಗಳ ಸಮೇತ, ಎಚ್ಚರಿಕೆಯಿಂದ ಸಂಗ್ರಹಿತವಾಗಿದೆ ಮತ್ತು ಅನುವಾದಿತವಾಗಿದೆ. ಇದರಲ್ಲಿ ಪಾಂಥಿಕ ಅಂಧಾಭಿಮಾನ ಇಲ್ಲ. ತಂಜೂರಿನಲ್ಲಿ ಭಗವದ್ಗೀತೆಯ ಹಲವಾರು ಶ್ಲೋಕಗಳು ಸೇರಿವೆ. ಭಾಷಾಂತರ ಕಾರ್ಯ ಏಳನೆಯ ಶತಮಾನದ ಮಧ್ಯಭಾಗದಿಂದ ಹಿಡಿದು ಸುಮಾರು ಸಾವಿರ ವರ್ಷಗಳ ಕಾಲ ನಡೆದಿದೆ. ಈ ಭಾಷಾಂತರಕಾರರು ಟಿಬೆಟ್ ಮತ್ತು ಭಾರತ ದೇಶಗಳ ಶ್ರೇಷ್ಠ ಭಾಷಾವಿಜ್ಞಾನಿಗಳು. ಕೆಲವು ಸಮಯಗಳಲ್ಲಿ ಪದ್ಮಸಂಭವ, ಶಾಂತರಕ್ಷಿತ ಮತ್ತು ಅತೀಶ ದೀಪಂಕರರಂಥ ಮಹಾಯೋಗಿಗಳು ಸ್ವತಃ ಈ ಭಾಷಾಂತರ ಕಾರ್ಯದಲ್ಲಿ ಪಾಲುಗೊಂಡಿದ್ದಾರೆ. ಈ ಪ್ರಕಾರವಾಗಿ ಭಾಷಾಂತರಿತವಾದ ಲೌಕಿಕ ಗ್ರಂಥಗಳ ಪೈಕಿ ಅಷ್ಟಾಧ್ಯಾಯೀ, ಮೇಘದೂತ, ಕಾವ್ಯಾದರ್ಶ, ಅಮರಕೋಶ, ಆಯುರ್ವೇದಾರಸಮುಚ್ಚಯ, ನಾಗಾನಂದ ಮತ್ತು ಪತ್ರಿಮಾಮಾನಲಕ್ಷಣಗಳು ಸೇರಿವೆ. 

ಇಡೀ ಪ್ರಪಂಚದ ಭಾಷಾಂತರಗಳ ಇತಿಹಾಸದಲ್ಲೇ ವಿಲಕ್ಷಣವಾಗಿ ಶೋಭಿಸುವ ರೀತಿಯಲ್ಲಿ ಈ ಭಾಷಾಂತರಗಳು ನಡೆದಿವೆ. ಪದಕ್ಕೆ ಪ್ರತಿ ಪದದಂತೆ ಭಾಷಾಂತರವಾಗಿದ್ದರೂ ಟಿಬೆಟನ್ ವಾಕ್ಯರಚನಾಕ್ರಮವನ್ನು ಇವು ಕಟ್ಟುನಿಟ್ಟಾಗಿ ಅನುಸರಿಸಿ ಆ ಭಾಷೆಯ ಸಾಹಿತ್ಯಕ್ಕೂ ಸಂಸ್ಕøತಿಗೂ ಹೊರತೆನಿಸಿದಂತಿವೆ. ಪರಿಣಾಮ ಬೆರಗು ಹುಟ್ಟಿಸುವಂಥದು. ಸಂಸ್ಕøತದಿಂದ ಟಿಬೆಟನ್ನಿಗೆ ಭಾಷಾಂತರವಾದ ಯಾವುದಾದರೂ ಗ್ರಂಥವನ್ನು ಪುನಃಸಂಸ್ಕøತಕ್ಕೆ ಪರಿವರ್ತಿಸುವುದಾದರೆ, ಅದು ಮೂಲಕೃತಿಯನ್ನೇ ಹೆಚ್ಚು ಕಡಿಮೆ ಸಂಪೂರ್ಣವಾಗಿ ಪುನರುದ್ಧರಿಸುತ್ತದೆ. ಇದರಿಂದ ಅನೇಕ ಸಂಸ್ಕøತದ ಸಂದಿಗ್ಧಪಾಠಗಳು ವಿಶದೀಕೃತವಾಗಿ ಸರಯಾದ ಪಾಠ ದೊರೆಯಲು ಅವು ಸಹಾಯಕವಾಗಿವೆಯಲ್ಲದೆ ಅವನ್ನು ಸರಿಯಾಗಿ ಅರ್ಥೈಸುವುದಕ್ಕೂ ಸಹಾಯಕವಾಗಿವೆ. ಮಧ್ಯ ಏಷ್ಯದ ಇತರ ಭಾಗಗಳಲ್ಲಿ ಮರಳಿನಲ್ಲಿ ಹೂತುಹೋಗಿದ್ದ ಪ್ರಸಿದ್ಧ ಸಂಸ್ಕøತ ಗ್ರಂಥಭಾಗಗಳು ಹೇಗೆ ಪತ್ತೆಯಾದವೋ ಅದೇ ರೀತಿಯಲ್ಲಿ ತುರುಕರ ದಾಳಿಗಳಿಂದ ಭಾರತದಲ್ಲಿ ನಷ್ಟವಾದ ಸಂಸ್ಕøತ ಗ್ರಂಥಗಳು ಟಿಬೆಟ್ಟಿನ ಬೌದ್ಧ ವಿಹಾರಗಳಲ್ಲಿ ಪತ್ತೆಯಾಗಿವೆ. ಈ ರೀತಿಯಲ್ಲಿ ಆ ಮಗ್ಯಾರ್ ಮಹಾವಿದ್ವಾಂಸ (ಛಿosmಚಿ-ಜe-ಞoಡಿos) ಹೇಳಿದಹಾಗೆ, ಟಿಬೆಟ್ಟಿನ ಸಾಹಿತ್ಯವೆಲ್ಲ ಸಂಪೂರ್ಣವಾಗಿ ಭಾರತೀಯ ಮೂಲದಿಂದ ಹುಟ್ಟಿರುವಂಥಾಗಿದ್ದರೆ, ಭಾರತೀಯ (ಸಂಸ್ಕøತ) ಸಾಹಿತ್ಯದ ಸಮಗ್ರ ವ್ಯಾಸಂಗಕ್ಕೆ ಟಿಬೆಟನ್ ಸಾಹಿತ್ಯದ ತಿಳಿವಳಿಕೆ ಅಗತ್ಯವಾಗಿ ಬೇಕಾಗುತ್ತದೆ. ಈಗಲೂ ಅನೇಕ ಅಜ್ಞಾತ ಸಂಸ್ಕøತ ಶಬ್ದಗಳು (ಮೂಲದಲ್ಲಾಗಲಿ ಭಾಷಾಂತರದಲ್ಲಾಗಲಿ) ಟಿಬೆಟನ್ ವಿಹಾರಗಳ ಪುಸ್ತಕಾಲಯಗಳಲ್ಲಿ ಶೇಖರಗೊಂಡಿವೆ. ಜೊತೆಗೆ ನಮ್ಮ ತಿಳಿವಳಿಕೆಗೆ ಬಂದಿರುವ ಅನೇಕ ಭಾಷಾಂತರಗಳ ಅನ್ವೇಷಣ ಸಹ ನಡೆಯಬೇಕಾಗಿದೆ.
(ಎ.ಸಿ.ಬಿ.; ಎನ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ